ಆಡಮ್ಸ್, ಜಾನ್ ಕೌಚ್
(1819-1892). ನೆಪ್ಚೂನ್ ಗ್ರಹವನ್ನು ಕಂಡುಹಿಡಿದ ಗೌರವ ಇವನಿಗೂ ಫ್ರೆಂಚ್ ಖಗೋಳಶಾಸ್ತ್ರಜ್ಞ ಯು.ಜೆ.ಜೆ. ಲೆವೆರಿಯರ್‍ಗೂ (1811-1877) ಸಲ್ಲುತ್ತದೆ. ಕೇಂಬ್ರಿಜ್‍ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ (1843) ಆಡಮ್ಸ್ ಯುರೇನಸ್ ಗ್ರಹದ ಕಕ್ಷೆಯಲ್ಲಿ ಪ್ರಕಟವಾದ ವಿಚಲನೆಗಳನ್ನು ಗಣಿತಶಾಸ್ತ್ರ ರೀತಿಯಾಗಿ ವಿವರಿಸಲು ಪ್ರಯತ್ನಿಸಿದ. ಇನ್ನೊಂದು ಗ್ರಹದ ಇರುವಿಕೆಯನ್ನು ಊಹಿಸಿ, ಅದರ ದೂರವನ್ನು ಬಹುಮಟ್ಟಿಗೆ ಬೋಡ್‍ನ ನಿಯಮಕ್ಕನುಸಾರವಾಗಿರುವಂತೆ ಊಹಿಸಿಕೊಂಡು, ಕಾಲ್ಪನಿಕ ಗ್ರಹದ ಸ್ಥಾನ ಮತ್ತು ಜಡತ್ವಗಳನ್ನು ನಿಷ್ಕøಷ್ಟವಾಗಿ ಗಣನೆ ಮಾಡಿದ. ಆದರೆ ತನ್ನ ನಿರ್ಧಾರಗಳನ್ನು ಆಡಮ್ಸ್ ಮುಂಚಿತವಾಗಿ ಪ್ರಕಟಿಸಲಿಲ್ಲ. ಪ್ಯಾರಿಸ್‍ನಲ್ಲಿ ಲೆವಾರಿರ್ ಸ್ವಂತವಾಗಿ ಪರ್ಯಾಲೋಚಿಸಿ ಹೊಸ ಗ್ರಹದ ಸ್ಥಾನವನ್ನು ನಿರ್ದೇಶಿಸಿದ. ಇವನ ಸಲಹೆಯಂತೆ ಬರ್ಲಿನ್‍ನಲ್ಲಿ ಜೆ.ಜೆಗಾಲ್ ಈ ಗ್ರಹವನ್ನು ವೀಕ್ಷಿಸಿದ (1846). ನೆಪ್ಚೂನ್ ಗ್ರಹಕ್ಕೆ ಸಂಬಂಧಿಸಿದ ಮೊತ್ತಮೊದಲ ಪ್ರಕಟಣೆಯನ್ನು ಲೆವೆರಿಯ ಮಾಡಿದ. ಹೀಗಾಗಿ ಹೊಸ ಗ್ರಹವನ್ನು ಕಂಡುಹಿಡಿದವರಾರು ಎಂಬುದರ ಬಗೆಗೆ ಭಿನ್ನಾಭಿಪ್ರಾಯಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್‍ನಲ್ಲಿ ತಲೆದೋರಿದುವು. ಆಡಮ್ಸ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಹಿರಿಯ ರ್ಯಾಂಗ್ಲರ್ ಆಗಿದ್ದ. 

(ನೋಡಿ- ಬೋಡನ-ಸೂತ್ರ) 								
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ